ಛಂದಸ್ಸು
ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.
ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ: 1. ಪ್ರಾಸ 2. ಯತಿ 3. ಗಣ
1. ಪ್ರಾಸ: ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.
ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯಪ್ರಾಸ.
2. ಯತಿ: ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.
3. ಗಣ: ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.
ಮಾತ್ರಾಗಣ: ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
ಮಾತ್ರೆ: ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.
ಲಘು: ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.
ಗುರು: ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.
ಪ್ರಸ್ತಾರ: ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.
ಅಕ್ಷರವು ಗುರು ಎನಿಸುವ ಲಕ್ಷಣಗಳು
ಲಕ್ಷಣ | ಉದಾಹರಣ |
---|---|
ದೀರ್ಘಾಕ್ಷರ | _ U ಶಾಲೆ |
ಒತ್ತಕ್ಷರದ ಹಿಂದಿನ ಅಕ್ಷರ | _ U U U ಒ ತ್ತಿ ನ ಣೆ |
ಅನುಸ್ವಾರದಿಂದ ಕೂಡಿರುವ ಅಕ್ಷರ | _ U U ಬಂ ದ ನು |
ವಿಸರ್ಗದಿಂದ ಕೂಡಿರುವ ಅಕ್ಷರ | _ U ದುಃಖ |
ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ | U U _ ಮನದೊಳ್ |
ಐ ಸ್ವರವಿರುವ ಅಕ್ಷರ | _ U U ಕೈ ಮು ಗಿ |
ಔ ಸ್ವರವಿರುವ ಅಕ್ಷರ | _ U ಮೌ ನ |
ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ |
ಅಕ್ಷರವು ಲಘು ಎನಿಸುವ ಲಕ್ಷಣಗಳು
ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.
ಮಾತ್ರಾಗಣ ಆಧಾರಿತ ಛಂದಸ್ಸುಗಳು
ಕಂದ ಪದ್ಯ
ಕಂದ ಪದ್ಯ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರದ ಛಂದಸ್ಸಾಗಿದೆ. ಕನ್ನಡದ ಅನೇಕ ಕವಿಗಳು ವಿಫುಲವಾಗಿ ಇದನ್ನು ಬಳಸಿಕೊಂಡಿದ್ದಾರೆ. ಇದು ಚತುರ್ಮಾತ್ರಾಗಣಗಳ ಗತಿಯಲ್ಲಿ ಬರುವ ಪ್ರಕಾರವಾಗಿದೆ. ಇದರಲ್ಲಿ ಮೊದಲ ಸಾಲಿನಲ್ಲಿ ಮೂರು ಗಣಗಳೂ ಎರಡನೇ ಸಾಲಿನಲ್ಲಿ ಐದು ಗಣಗಳೂ ಪುನಃ ಮೂರನೇ ಸಾಲಿನಲ್ಲಿ ಮೂರು ಗಣಗಳೂ ನಾಲ್ಕನೇ ಸಾಲಿನಲ್ಲಿ ಐದು ಗಣಗಳೂ ಇರುತ್ತವೆ. ಎಲ್ಲಾ ಗಣಗಳು ನಾಲ್ಕು ಮಾತ್ರೆಗಳಿಗೆ ವಿಭಾಗಿಸಲ್ಪಟ್ಟಿರುತ್ತವೆ. ಅದನ್ನು ಹೀಗೆ ತೋರಿಸಬಹುದು.
೪ + ೪ + ೪ + ೪ + ೪ =20
೪ + ೪ + ೪ + ೪ + ೪ =20
೪ + ೪ + ೪ =12
೪ + ೪ + ೪ + ೪ + ೪ =20
ಕಂದದ ನಿಯಮಗಳು:
1.ಇದರಲ್ಲಿ ವಿಷಮ ಸ್ಥಾನಗಳಲ್ಲಿ ಅಂದರೆ 1,3,5,7 ಹಾಗೇ 9,11,13,15 ನೇ ಗಣಗಳಲ್ಲಿ ಜಗಣ ಅಂದರೆ ಮಧ್ಯಗುರು ಇರುವ U_U ವಿನ್ಯಾಸ ಬರಬಾರದು
2. ಎರಡನೇ ಹಾಗೂ ನಾಲ್ಕನೇ ಸಾಲಿನ ಕೊನೆಯ ಗಣವು ಅಂತ್ಯಗುರುಯುಕ್ತವಾಗಿರಬೇಕು. ಅಂದರೆ UU_ ಅಥವಾ __ ಈ ವಿನ್ಯಾಸಗಳು ಬರಬಹುದು.
3. 6ನೇ ಹಾಗೂ 14ನೇ ಗಣಗಳು ಮಾತ್ರ ಮಧ್ಯ ಗುರು ಇರುವ ಜಗಣ ವಿನ್ಯಾಸ (U_U) ಅಥವಾ ಸರ್ವಲಘುಗಳಿರುವ ವಿನ್ಯಾಸ (U,UUU) ಬರಬಹುದು. ಸರ್ವಲಘುಗಳಿರುವ ವಿನ್ಯಾಸ ಬಂದಲ್ಲಿ ಮೊದಲ ಅಕ್ಷರದ ನಂತರ ಯತಿ ಬರಲೇಬೇಕು.
4. ಉಳಿದ ಗಣಗಳಲ್ಲಿ ಯಾವ ರೀತಿಯ ವಿನ್ಯಾಸ ಬೇಕಾದರೂ ಬರಬಹುದು.
ಉದಾಹರಣೆ:
U U U U | _ _ |U U U U |
ಒಡೆಯಲ |ಜಾಂಡಂ | ಕುಲಗಿರಿ |
U U _ | U U_|U _ U|UU_| U U_|
ಕೆಡೆಯಲ್| ಪಿಳಿಯ|ಲ್ಕೆ ಧಾತ್ರಿ|ದಿವಿಜರ್| ನಡುಗ-|
U U U U| U _U | _ U U|
ಲ್ಕೊಡರಿಸು |ವಿನಂ ಜ | ಟಾಸುರ|
U _ U| UU_|U_U | _ _|__|
ಹಿಡಿಂಬ | ಬಕವೈ|ರಿ ಸಿಂಹ|ನಾದಂ| ಗೆಯ್ದಂ||
ಈ ಪದ್ಯ ರಚನೆಯ ಕುರಿತ ವಿಡಿಯೋ ಹಾಗೂ ವಿವರಗಳನ್ನು ಪದ್ಯಪಾನ ಜಾಲದಲ್ಲಿಯೂ ನೋಡಬಹುದು.ಕಂದಪದ್ಯ ರಚನೆಗೆ ಪ್ರಯತ್ನಿಸಲು ಕೂಡ ಈ ವಿಡಿಯೋ ಸಹಕಾರಿಯಾಗಿದೆ.
ಷಟ್ಪದಿ
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.
ಕನ್ನಡ ಸಾಹಿತ್ಯದಲ್ಲಿ ಷಟ್ಪದಿ: ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. ಕುಮಾರವ್ಯಾಸನ 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ.
ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು: 1. ಶರ 2. ಕುಸುಮ 3. ಭೋಗ 4. ಭಾಮಿನೀ 5. ವಾರ್ಧಕ 6. ಪರಿವರ್ಧಿನೀ
ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:
ವೇದ ಪುರುಷನ | ಸುತನ ಸುತನ ಸ
ಹೋದರನ ಹೆ|ಮ್ಮಗನ ಮಗನ ತ
ಳೋದರಿಯ ಮಾ|ತುಳನ ಮಾವನ|ನತುಳಭುಜಬಲ|ದಿ
ಕಾದು ಗೆಲಿದನ|ನಣ್ಣನವ್ವೆಯ
ನಾದಿನಿಯ ಜಠ|ರದಲಿ ಜನಿಸಿದ
ನಾದಿಮೂರುತಿ | ಸಲಹೊ ಗದುಗಿನ | ವೀರನಾರಯ|ಣ
'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ.
ಷಟ್ಪದಿಗಳೂ ಸೇರಿದಂತೆ ಹಲವಾರು ಛಂದೋಪ್ರಕಾರಗಳ ಲಕ್ಷಣಗಳ ಕೈಗೆಟುಕುವಂತಹ ವಿವರಣೆಯನ್ನು ಅ.ರಾ. ಮಿತ್ರರ 'ಛಂದೋಮಿತ್ರ' ದಲ್ಲಿ ಕಾಣಬಹುದು. ಷಟ್ಪದಿಗಳ ಉಗಮ ವಿಕಾಸಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸೇಡಿಯಾಪು ಕೃಷ್ಣಭಟ್ಟರ, ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾಣಬಹುದು.
ಶರ ಷಟ್ಪದಿ: ಶರ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಶರವೇ ಷಟ್ಪದಿಯಲ್ಲಿ ಅತ್ಯಂತ ಚಿಕ್ಕದು. ನಾಗವರ್ಮ ಹೇಳಿರುವ ಇದರ ಲಕ್ಷಣಗಳು. ಶರ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೪ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೪ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಇದರಲ್ಲಿ ಮಧ್ಯೆ ಗುರುವಿನ ಅಂದರೆ (U - U)ಜಗಣ, ಶರ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು.
ಉದಾಹರಣೆ:
ಈಶನ ಕರುಣೆಯ
ನಾಶಿಸು ವಿನಯದಿ
ದಾಸನ ಹಾಗೆಯೆ ನೀ ಮನವೇ
ಕ್ಲೇಶದ ವಿಧ ವಿಧ
ಪಾಶದ ಹರಿದು ವಿ
ಲಾಸದಿ ಸತ್ಯವ ತಿಳಿಯನವೇ
ಇದರ ಛಂದಸ್ಸಿನ ಪ್ರಸ್ತಾರ:
ಈಶನ |ಕರುಣೆಯ
ನಾಶಿಸು | ವಿನಯದಿ
ದಾಸನ | ಹಾಗೆಯೆ | ನೀ ಮನ | ವೇ
ಕ್ಲೇಶದ | ವಿಧ ವಿಧ
ಪಾಶದ | ಹರಿದು ವಿ
ಲಾಸದಿ | ಸತ್ಯವ | ತಿಳಿಯನ | ವೇ
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೪|೪
೪|೪
೪|೪|೪|-
೪|೪
೪|೪
೪|೪|೪|-
ಕುಸುಮ ಷಟ್ಪದಿ: ಕುಸುಮ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ(೧೪೩೦)'ಮನೋವಿಜಯ'ಕಾವ್ಯಕುಸುಮ ಷಟ್ಪದಿಯಲ್ಲಿದೆ
ಉದಾಹರಣೆ:
ನಾಡುಮನ ಸಿಜನೊಲವಿ
ನಾಡು ವೆಡೆ ಸಂತತಂ
ಬೀಡು ರತಿ ಪತಿಗೆ ಸತತ ನಿಧಾನವು
ನೋಡಿದ ನಿಮಿಷ ಪತಿಗೆ
ಮಾಡುವುದು ವಿನಯವನು
ನಾಡಾದಿಯವರ್ಗೆ ಬಣ್ಣಿಸಲು ಮೊಗ್ಗೇ
ಇದರ ಛಂದಸ್ಸಿನ ಪ್ರಸ್ತಾರ:
ನಾಡುಮನ |ಸಿಜನೊಲವಿ|
ನಾಡು ವೆಡೆ |ಸಂತತಂ |
ಬೀಡು ರತಿ |ಪತಿಗೆ ಸತ|ತ ನಿಧಾನ|ವು|
ನೋಡಿದ ನಿ|ಮಿಷ ಪತಿಗೆ|
ಮಾಡುವುದು |ವಿನಯವನು|
ನಾಡಾದಿ|ಯವರ್ಗೆ ಬ|ಣ್ಣಿಸಲು ಮೊ|ಗ್ಗೇ
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೫|೫
೫|೫|೫|-
೫|೫
೫|೫
೫|೫|೫|-
ಭೋಗ ಷಟ್ಪದಿ: ಭೋಗ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೩ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೩ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ 'ವೃಷಭಗೀತೆ'ಕಾವ್ಯಭೋಗ ಷಟ್ಪದಿಯಲ್ಲಿದೆ
ಉದಾಹರಣೆಗೆ:
ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ವೊರಗಿರುತ್ತಲೊಂದು ಕನಸಕಂಡನೆಂತನೆ
ಪುರದ ರಾಜಸತ್ತನವಗೆ
ವರ ಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮ ಮಾಲೆಯಿತ್ತು ಪುರದೊಳು
ಇದರ ಛಂದಸ್ಸಿನ ಪ್ರಸ್ತಾರ:
ತಿರುಕ|ನೋರ್ವ|ನೂರ| ಮುಂದೆ|
ಮುರುಕು| ಧರ್ಮ|ಶಾಲೆ|ಯಲ್ಲಿ|
ವೊರಗಿ|ರುತ್ತ|ಲೊಂದು| ಕನಸ|ಕಂಡ|ನೆಂತ|ನೆ
ಪುರದ |ರಾಜ|ಸತ್ತ|ನವಗೆ|
ವರ ಕು|ಮಾರ|ರಿಲ್ಲ|ದಿರಲು
ಕರಿಯ| ಕೈಗೆ| ಕುಸುಮ| ಮಾಲೆ|ಯಿತ್ತು| ಪುರದೊ|ಳು
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೩|೩|೩|೩
೩|೩|೩|೩
೩|೩|೩|೩|೩|೩|-
೩|೩|೩|೩
೩|೩|೩|೩
೩|೩|೩|೩|೩|೩|-
ಭಾಮಿನೀ ಷಟ್ಪದಿ: ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲಿಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, ೭ ಮಾತ್ರೆಗಳ ಗಣಗಳು ಕಡ್ಡಾಯವಾಗಿ ೩+೪ ಮಾದರಿಯಲ್ಲಿರಬೇಕು. ಅಂದರೆ ೩ ಮಾತ್ರೆಯ ಗಣದ ನಂತರ ೪ ಮಾತ್ರೆಯ ಗಣವು ಬಂದು, ಒಟ್ಟು ೭ ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:
ಉದಾಹರಣೆಗೆ:
ವೇದ ಪುರುಷನ ಸುತನ ಸುತನ ಸ
ಹೋದರನ ಹಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನ ನತುಳಭುಜಬಲದಿ
ಕಾದು ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ
ಈ ಪದ್ಯವನ್ನು ಗಣಗಳಾಗಿ ವಿಂಗಡಿಸಿದಾಗ ಹೀಗೆ ಕಾಣುವುದು:
ವೇದ| ಪುರುಷನ | ಸುತನ| ಸುತನ ಸ
ಹೋದ|ರನ ಹೆ|ಮ್ಮಗನ| ಮಗನ ತ
ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ
ಕಾದು| ಗೆಲಿದನ|ನಣ್ಣ|ನವ್ವೆಯ
ನಾದಿ|ನಿಯ ಜಠ|ರದಲಿ| ಜನಿಸಿದ
ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ
'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೩|೪|೩|೪
೩|೪|೩|೪
೩|೪|೩|೪|೩|೪|-
೩|೪|೩|೪
೩|೪|೩|೪
೩|೪|೩|೪|೩|೪|-
ವಾರ್ಧಕ ಷಟ್ಪದಿ: ವಾರ್ಧಕ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿಯೇ. ವಾರ್ಧಕ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ನಾಲ್ಕು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ಆರುಗಳಗಳಿದ್ದು, ಕೊನೆಯಲ್ಲಿ ಒಂದು ಗುರು ಇರುತ್ತದೆ. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.
ಉದಾಹರಣೆ:
ಬಲ್ಗಯ್ಯ ನೃಪರಂಜಿ ತಡೆಯದೆರ ಘೂದ್ವಹನ
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ
ನಲ್ಗುದುರೆ ಬಂದು ವಾಲ್ಮೀಕಿಯನಿಜಾಶ್ರಮದ ವಿನಿಯೋಗದು ಪವನದೊಳು
ಪುಲ್ಗಳಪ ಸುರ್ಗೆಳಸಿ ಪೊಕ್ಕಡಾ ತೋಟಗಾ
ವಲ್ಗೆತನ್ನೊಡನಾಡಿ ಗಳಕೂಡಿ ಲೀಲೆಮಿಗೆ
ಬಿಲ್ಗೊಂಡು ನಡೆತಂದ ವಂಕಂಡ ನರ್ಚಿತಸು ವಾಜಿಯಂ ವೀರಲವನು
ಇದರ ಛಂದಸ್ಸಿನ ಪ್ರಸ್ತಾರ:
ಬಲ್ಗಯ್ಯ | ನೃಪರಂಜಿ | ತಡೆಯದೆರ | ಘೂದ್ವಹನ
ಸೊಲ್ಗೇಳಿ | ನಮಿಸಲಿಳೆ | ಯೊಳ್ ಚರಿಸು | ತಧ್ವರದ
ನಲ್ಗುದುರೆ | ಬಂದು ವಾ | ಲ್ಮೀಕಿಯನಿ | ಜಾಶ್ರಮದ | ವಿನಿಯೋಗ | ದು ಪವನದೊ| ಳು
ಪುಲ್ಗಳಪ | ಸುರ್ಗೆಳಸಿ | ಪೊಕ್ಕಡಾ | ತೋಟಗಾ
ವಲ್ಗೆತ | ನ್ನೊಡನಾಡಿ | ಗಳಕೂಡಿ | ಲೀಲೆಮಿಗೆ
ಬಿಲ್ಗೊಂಡು | ನಡೆತಂದ | ವಂಕಂಡ | ನರ್ಚಿತಸು | ವಾಜಿಯಂ | ವೀರಲವ | ನು
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೫|೫|೫|೫
೫|೫|೫|೫
೫|೫|೫|೫|೫|೫|-
೫|೫|೫|೫
೫|೫|೫|೫
೫|೫|೫|೫|೫|೫|-
ಪರಿವರ್ಧಿನೀ ಷಟ್ಪದಿ: ಪರಿವರ್ಧಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಪರಿವರ್ಧಿನೀ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೪ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೪ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು).
ಉದಾಹರಣೆಗೆ:
ಸ್ಮರವಾಜ್ಯದ ಮೈಸಿರಿ ಶೃಂಗಾರದ
ಶರನಿಧಿರತಿ ನಾಟ್ಯದರಂಗಸ್ಥಳ
ವಿರಹದ ನೆಲೆವೀಡೋಪರಕೂರಾಟದ ಕೊಸರಿನ ಗೊತ್ತು
ಸರಸರ ಸಂತವಣೆಯ ಮನೆ ಸುಗ್ಗಿಯ
ಪೊರವಾಗರ ಭಾವಾಲಯ ವಪ್ಪಂ
ತಿರೆಪೇರೆದನ ಮರುಕವನು ದೇಪಮಹೀಪತಿ ಕನ್ನಡಿಸಿ
ಇದರ ಛಂದಸ್ಸಿನ ಪ್ರಸ್ತಾರ:
ಸ್ಮರವಾ|ಜ್ಯದ ಮೈ|ಸಿರಿ ಶೃಂ|ಗಾರದ|
ಶರನಿಧಿ|ರತಿ ನಾ|ಟ್ಯದರಂ|ಗಸ್ಥಳ|
ವಿರಹದ| ನೆಲೆವೀ|ಡೋಪರ|ಕೂರಾ|ಟದ ಕೊಸ|ರಿನ ಗೊ|ತ್ತು
ಸರಸರ |ಸಂತವ|ಣೆಯ ಮನೆ |ಸುಗ್ಗಿಯ|
ಪೊರವಾ|ಗರ ಭಾ|ವಾಲಯ| ವಪ್ಪಂ
ತಿರೆಪೇ|ರೆದನ ಮ|ರುಕವನು| ದೇಪಮ|ಹೀಪತಿ| ಕನ್ನಡಿ|ಸಿ
'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
೪|೪|೪|೪
೪|೪|೪|೪
೪|೪|೪|೪|೪|೪|-
೪|೪|೪|೪
೪|೪|೪|೪
೪|೪|೪|೪|೪|೪|-
ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:
ವೇದ ಪುರುಷನ | ಸುತನ ಸುತನ ಸ
ಹೋದರನ ಹೆ | ಮ್ಮಗನ ಮಗನ ತ
ಳೋದರಿಯ ಮಾ | ತುಳನ ಮಾವನ | ನತುಳಭುಜಬಲ | ದಿ
ಕಾದು ಗೆಲಿದನ | ನಣ್ಣನವ್ವೆಯ
ನಾದಿನಿಯ ಜಠ | ರದಲಿ ಜನಿಸಿದ
ನಾದಿಮೂರುತಿ | ಸಲಹೊ ಗದುಗಿನ | ವೀರನಾರಯ | ಣ
'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ.
ಷಟ್ಪದಿಗಳೂ ಸೇರಿದಂತೆ ಹಲವಾರು ಛಂದೋಪ್ರಕಾರಗಳ ಲಕ್ಷಣಗಳ ಕೈಗೆಟುಕುವಂತಹ ವಿವರಣೆಯನ್ನು ಅ.ರಾ. ಮಿತ್ರರ 'ಛಂದೋಮಿತ್ರ' ದಲ್ಲಿ ಕಾಣಬಹುದು. ಷಟ್ಪದಿಗಳ ಉಗಮ ವಿಕಾಸಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸೇಡಿಯಾಪು ಕೃಷ್ಣಭಟ್ಟರ, ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾಣಬಹುದು.
ರಗಳೆ
ಅಕ್ಷರಗಣ
ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ.
ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.
ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.
1. ಯಗಣ 2. ಮ ಗಣ 3. ತಗಣ 4. ರಗಣ 5. ಜಗಣ 6. ಭಗಣ 7. ನಗಣ 8. ಸಗಣ
ಯಮಾತಾರಾಜಭಾನ ಸಲಗಂ ಸೂತ್ರ
ಅಕ್ಷರಗಣಗಳನ್ನು ಯಮಾತಾರಾಜಭಾನ ಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.
ಗಣ | ಅಕ್ಷರಗಳು | ಪ್ರಸ್ತಾರ |
---|---|---|
ಯಗಣ | ಯಮಾತಾ | U _ _ |
ಮಗಣ | ಮಾತಾರಾ | _ _ _ |
ತಗಣ | ತಾರಾಜ | _ _ U |
ರಗಣ | ರಾಜಭಾ | _ U _ |
ಜಗಣ | ಜಭಾನ | U _ U |
ಭಗಣ | ಭಾನಸ | _ U U |
ನಗಣ | ನಸಲ | U U U |
ಸಗಣ | ಸಲಗಂ | U U _ |
ಗಣಗಳನ್ನು ಗುರುತಿಸುವ ಪದ್ಯ: ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.
ಗುರು ಲಘು ಮೂರಿರೆ ಮ - ನ - ಗಣ
ಗುರು ಲಘು ಮೊದಲಲ್ಲಿ ಬರಲು ಭ - ಯ - ಗಣಮೆಂಬರ್
ಗುರು ಲಘು ನಡುವಿರೆ ಜ - ರ - ಗಣ
ಗುರು ಲಘು ಕೊನೆಯಲ್ಲಿ ಬರಲು ಸ - ತ - ಗಣಮಕ್ಕುಂ
ವೃತ್ತಗಳು: ಅಕ್ಷರಗಣದ ಛಂದಸ್ಸನ್ನು ವೃತ್ತ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಆರು ವೃತ್ತಗಳಿವೆ.
ಅಂಶಗಣ: ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ. ಇದರಲ್ಲಿ ಮೂರು ವಿಧ.ಎರಡು ಅಂಶಗಳ ಗಣವನ್ನು ಬ್ರಹ್ಮಗಣ ಎಂತಲೂ, ಮೂರು ಅಂಶಗಳ ಗಣವನ್ನು ವಿಷ್ಣುಗಣ ಎಂತಲೂ ನಾಲ್ಕು ಅಂಶಗಳ ಗಣವನ್ನು ರುದ್ರಗಣ ಎಂತಲೂ ಕರೆಯುವರು. ಸಾಂಗತ್ಯ ಮತ್ತು ಕೆಲವು ತ್ರಿಪದಿಗಳು ಅಂಶಗಣಕ್ಕೆ ಸೇರಿದವು.
ತ್ರಿಪದಿ: ತ್ರಿಪದಿ ಅಂದರೆ ಮೊರು ಸಾಲಿನ ಪದ್ಯ , ಇದರಲ್ಲಿ ವಿಶೇಷವಾಗಿ ಸರ್ವಜ್ಝನ ವಚನಗಳಲ್ಲಿ ಕಂಡುಬರುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ